ಹೊಸಕೋಟೆ
	ಭಾರತದ ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ದೇವನಹಳ್ಳಿ ಮತ್ತು ಕೋಲಾರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕುಗಳೂ ಪಶ್ಚಿಮದಲ್ಲಿ ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ತಾಲ್ಲೂಕುಗಳೂ ದಕ್ಷಿಣದಲ್ಲಿ ಆನೇಕಲ್ಲು ತಾಲ್ಲೂಕು ಮತ್ತು ತಮಿಳುನಾಡು ರಾಜ್ಯವೂ ಪೂರ್ವದಲ್ಲಿ ಕೋಲಾರ ಜಿಲ್ಲೆಯ ಮಾಲೂರು ಮತ್ತು ಕೋಲಾರ ತಾಲ್ಲೂಕುಗಳೂ ಸುತ್ತುವರಿದಿವೆ. 356 ಗ್ರಾಮಗಳಿರುವ ತಾಲ್ಲೂಕಿನ ವಿಸ್ತೀರ್ಣ 666.9 ಚ.ಕಿಮೀ. ಜನಸಂಖ್ಯೆ 2,22,726.

	ಜಿಲ್ಲೆಯ ಪೂರ್ವದಂಚಿನಲ್ಲಿರುವ ಈ ತಾಲ್ಲೂಕು ಸಾಮಾನ್ಯ ಏರುತಗ್ಗುಗಳಿಂದ ಕೂಡಿದೆ. ದಕ್ಷಿಣಪಿನಾಕಿನಿ ಈ ತಾಲ್ಲೂಕಿನ ಮುಖ್ಯನದಿ. ಉತ್ತರದಲ್ಲಿ ಸ್ವಲ್ಪದೂರ ತಾಲ್ಲೂಕಿನ ಗಡಿಯಾಗಿ ಹರಿದು ತಾಲ್ಲೂಕನ್ನು ಪ್ರವೇಶಿಸುತ್ತಲೇ ಹೊಸಕೋಟೆಯ ದೊಡ್ಡಕೆರೆಗೆ ನೀರೊದಗಿಸಿ ಮುಂದೆ ದಕ್ಷಿಣಾಭಿಮುಖವಾಗಿ ಹರಿಯುವುದು. ತಾಲ್ಲೂಕಿನಲ್ಲಿ ವ್ಯವಸಾಯಯೋಗ್ಯ ವಾದ ಅನೇಕ ಕೆರೆ ಮತ್ತು ಬಾವಿಗಳಿವೆ. ತಂಪಾದ ಹವೆ ಇದ್ದು ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 849.50 ಮಿಮೀ.

	ಈ ತಾಲ್ಲೂಕಿನ ಕೆಲವೆಡೆ ಜಂಬುಮಣ್ಣಿನ ಪ್ರದೇಶವಿದೆ. ಇನ್ನು ಕೆಲವೆಡೆ ಇಟ್ಟಿಗೆ, ಹೆಂಚು ತಯಾರಿಸುವಂಥ ಮಣ್ಣು ಇರುವ ಪ್ರದೇಶಗಳಿವೆ. ತಾಲ್ಲೂಕಿನ ನದಿದಂಡೆ ಪ್ರದೇಶ ಮತ್ತು ನಂದಗುಡಿಯ ಸುತ್ತಲ ಪ್ರದೇಶ ಮತ್ತು ಪೂರ್ವಭಾಗ ವ್ಯವಸಾಯ ಯೋಗ್ಯವಾಗಿದೆ. ಬೆಂಗಳೂರು ರಸ್ತೆ ಮತ್ತು ನಂದಗುಡಿಯ ದಕ್ಷಿಣಭಾಗ ಪ್ರದೇಶಗಳಲ್ಲಿ ರಾಗಿ, ಬತ್ತ, ದ್ವಿದಳ ಧಾನ್ಯಗಳನ್ನೂ ತರಕಾರಿ ಹಣ್ಣುಗಳನ್ನೂ ಬೆಳೆಯುವರು. ಉಳಿದೆಡೆ ಆಲೂಗೆಡ್ಡೆ ಮುಂತಾದ ಬೆಳೆ ತೆಗೆಯುವರು. ಈ ಭಾಗದಲ್ಲಿ ಹೆಚ್ಚಾಗಿ ದ್ರಾಕ್ಷಿ ಬೆಳೆಯುತ್ತಾರೆ. ವ್ಯವಸಾಯದ ಜೊತೆ ಪಶುಪಾಲನೆಯುಂಟು.

	ತಾಲ್ಲೂಕಿನಲ್ಲಿ ರೇಷ್ಮೆನೂಲು ತಯಾರಿಕೆಯುಂಟು. ಬೀಡಿ, ಇಟ್ಟಿಗೆ, ಹೆಂಚು ತಯಾರಿಕೆ ಮತ್ತು ಇತರ ಗ್ರಾಮೋದ್ಯೋಗಗಳಿವೆ. ತಾಲ್ಲೂಕಿನಿಂದ ಹೆಚ್ಚಾಗಿ ಹೊರಹೋಗುವ ಇತರ ಪದಾರ್ಥಗಳೆಂದರೆ ದ್ರಾಕ್ಷಿ, ಆಲೂಗೆಡ್ಡೆ ಮತ್ತು ತರಕಾರಿಗಳು. ಬೆಂಗಳೂರು-ಕೋಲಾರ ರಾಷ್ಟ್ರಿಯ ಹೆದ್ದಾರಿಯೂ ಬೆಂಗಳೂರು-ಹೊಸಕೋಟೆ-ಚಿಂತಾಮಣಿ ರಾಜ್ಯ ಹೆದ್ದಾರಿಯೂ ಬೆಂಗಳೂರು-ಚನ್ನೈ ಬ್ರಾಡ್‍ಗೇಜ್ ರೈಲುಮಾರ್ಗವೂ ಈ ತಾಲ್ಲೂಕಿನಲ್ಲಿ ಹಾದುಹೋಗಿದೆ.

	ಹೊಸಕೋಟೆಯ ಈಶಾನ್ಯಕ್ಕೆ 6 ಕಿಮೀ ದೂರದಲ್ಲಿರುವ ದಾಸರಹಳ್ಳಿಯಲ್ಲಿ ಚನ್ನರಾಯ ದೇವಾಲಯವಿದೆ. ಈ ದೇವಾಲಯದ ಬಳಿ ಒಂದು ತೆರೆದ ಮಂಟಪವಿದ್ದು ಇದರ ನಾಲ್ಕು ಪ್ರವೇಶದ್ವಾರಗಳಲ್ಲೂ ದ್ವಾರಪಾಲಕರಿದ್ದಾರೆ. ಈ ಮಂಟಪವನ್ನು ಉತ್ತಲಕಂಬವೆಂದು ಕರೆಯುವರು. ಹೊಸಕೋಟೆಯ ಉತ್ತರಕ್ಕೆ 8 ಕಿಮೀ ದೂರದಲ್ಲಿರುವ ಹಸಿಗಲ ಗ್ರಾಮದಲ್ಲಿ ಚೋಳರ ಕಾಲದ ಸೋಮೇಶ್ವರ ದೇವಾಲಯವಿದೆ. ಈ ದೇವಾಲಯದಲ್ಲಿ ಸುಂದರವಾದ ಮತ್ತು ವಿಚಿತ್ರ ಕೆತ್ತನೆಗಳಿವೆ. ಉದಾಹರಣೆಗೆ, ಸರ್ಪದ ತಲೆಯಿರುವ ನವಿಲೊಂದು ನವಿಲುತಲೆಯಿರುವ ಸರ್ಪವೊಂದನ್ನು ಎದುರಿಸುತ್ತ ನಿಂತಿರುವ ಒಂದು ಕೆತ್ತನೆಯಿದೆ. ಹೊಸಕೋಟೆಯ ಈಶಾನ್ಯಕ್ಕೆ ಹೊಸಕೋಟೆ-ಚಿಂತಾಮಣಿ ಮಾರ್ಗಮಧ್ಯದ ಲ್ಲಿರುವ ಹಿಂಡಿಗನಾಳು ಗ್ರಾಮದಲ್ಲಿ ತ್ರಿಕೂಟಾಚಲ ರಾಮದೇವಾಲಯವಿದೆ. ಗ್ರಾಮದ ಉತ್ತರದಲ್ಲಿ ಒಂದು ಮಾಸ್ತಿಕಲ್ಲಿದೆ. ಹೊಸಕೋಟೆಯ ಈಶಾನ್ಯಕ್ಕೆ 21 ಕಿಮೀ ದೂರದಲ್ಲಿರುವ ಬನಹಳ್ಳಿ ಹೊಸಕೋಟೆ-ಚಿಂತಾಮಣಿ ಮಾರ್ಗದಲ್ಲಿದೆ. ಈ ಗ್ರಾಮದಲ್ಲಿ ಸಪ್ತಮಾತೃಕೆಯರು, ಗಣಪತಿ, ಕುಳಿತಿರುವ ದಕ್ಷಿಣಾಮೂರ್ತಿ ಮುಂತಾದ ವಿಗ್ರಹಗಳಿರುವ ಒಂದು ಹಳೆಯ ದೇವಾಲಯವೂ ಒಂದು ನೊಳಂಬ ಶಾಸನವೂ ಇದೆ. ಹೊಸಕೋಟೆಯ ಈಶಾನ್ಯಕ್ಕೆ 18 ಕಿಮೀ ದೂರವಿರುವ ಕೊಂಡ್ರಹಳ್ಳಿಯಲ್ಲಿ ಚೋಳರ ಕಾಲದ್ದಿರಬಹುದೆನ್ನುವ ಧರ್ಮೇಶ್ವರ ದೇವಾಲಯವಿದೆ. ಇಲ್ಲಿನ ಈಶ್ವರ ಲಿಂಗವನ್ನು ಧರ್ಮರಾಯ ಸ್ಥಾಪಿಸಿದ್ದೆಂದು ಹೇಳುವರು. ಚೋಳದೊರೆ ರಾಜಮಹೇಂದ್ರನ ಒಂದು ಶಾಸನವಿದೆ. ಹೊಸಕೋಟೆಯ ಆಗ್ನೇಯಕ್ಕೆ ತಾಲ್ಲೂಕಿನ ಅಂಚಿನಲ್ಲಿರುವ ಖಾಜಿ ಹೊಸಹಳ್ಳಿಯಲ್ಲಿ ಸು. 7ನೆಯ ಶತಮಾನದ ಶಾಸನವಿದ್ದು ವಿನಯಾದಿತ್ಯನೆಂಬುವನ ಆಳಿಕೆ ಕುರಿತು ಮಾಹಿತಿ ನೀಡಿದೆ. ನಿಜಗುಣ ಸುಜ್ಞಾನ ಮೂರ್ತಿಯ ಗದ್ದುಗೆಯಿರುವ ಒಂದು ಮಠವಿದೆ. ಹೊಸಕೋಟೆಗೆ ಆಗ್ನೇಯದಲ್ಲಿ 10 ಕಿಮೀ ದೂರದಲ್ಲಿರುವ ವಗತ ಗ್ರಾಮದಲ್ಲಿ ದ್ರಾವಿಡಶೈಲಿಯ ಹಳೆಯ ವರದರಾಜ ದೇವಾಲಯವಿದೆ. ಇಲ್ಲಿನ ಚೌಡೇಶ್ವರಿ ದೇವಾಲಯದ ಮುಂಭಾಗದ ತೋರಣಗಂಭದಲ್ಲಿ ರಾಜೇಂದ್ರಚೋಳನ (1020) ಒಂದು ಶಾಸನವಿದೆ. ಹಿಂದೆ ಈ ಗ್ರಾಮಕ್ಕೆ ವರದರಾಜ ಚತುರ್ವೇದಿಮಂಗಲಂ ಎಂದು ತಮಿಳಿನಲ್ಲೂ ಭಾಗೀರಥಿಪುರ ಅನಂತರ ಯೋಗವತಪುರಿ ಅಥವಾ ಯೋಗಪುರಿ ಎಂಬ ಹೆಸರಿತ್ತೆಂದೂ ತಿಳಿದು ಬರುವುದು. ಹೊಸಕೋಟೆಯ ಈಶಾನ್ಯಕ್ಕೆ ತಾಲ್ಲೂಕಿನ ಅಂಚಿನಲ್ಲಿರುವ ಹೊಸಹಳ್ಳಿಯಲ್ಲಿ ಎರಡು ಮಾಸ್ತಿಕಲ್ಲುಗಳಿವೆ.					
							*
	ಹೊಸಕೋಟೆ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಬೆಂಗಳೂರಿನ ಪೂರ್ವಕ್ಕೆ ಬೆಂಗಳೂರು-ಕೋಲಾರ ಹೆದ್ದಾರಿಯಲ್ಲಿ ಬೆಂಗಳೂರಿಗೆ 26 ಕಿಮೀ ದೂರದಲ್ಲಿದೆ. ಜನಸಂಖ್ಯೆ 36,333.

	ಪಟ್ಟಣವನ್ನು ಪಶ್ಚಿಮ ಮತ್ತು ಉತ್ತರದಲ್ಲಿ ದಕ್ಷಿಣಪಿನಾಕಿನಿ ಯಿಂದಾದ ದೊಡ್ಡಕೆರೆ ಬಳಸಿದೆ. ಪಟ್ಟಣ ಬೆಂಗಳೂರಿಗೆ ಹತ್ತಿರದಲ್ಲಿದ್ದು ಸುತ್ತಲ ಗ್ರಾಮಗಳಿಗೆ ವ್ಯಾಪಾರಕೇಂದ್ರವಾಗಿದೆ.

	ಇಲ್ಲಿನ ಕೋಟೆಯನ್ನು (ಹೊಸಕೋಟೆ) 1595ರಲ್ಲಿ ಸುಗಟೂರಿನ ಪ್ರಭುತಮ್ಮೇಗೌಡ ಕಟ್ಟಿಸಿದನೆಂದು ಹೇಳುವರು. ಈತ 1632ರ ವರೆಗೂ ಆಳಿದ. ಮುಂದೆ ಬಿಜಾಪುರದ ವಶವಾಗಿ ಶಹಾಜಿಗೆ ಜಹಗೀರಾಗಿ ಕೊಡಲಾಯಿತು. 1663ರಲ್ಲಿ ಮೊಗಲರ ವಶವಾಗಿ ಶಿರಾ ಪ್ರಾಂತ್ಯಕ್ಕೆ ಸೇರಿತು. 1756ರಲ್ಲಿ ಹೊಸಕೊಟೆ ಮೈಸೂರಿಗೆ ಸೇರಿತು. ಆದರೆ ಮತ್ತೆ ಮರಾಠರ ವಶವಾಯಿತು. ಅಂತಿಮವಾಗಿ 1761ರಲ್ಲಿ ಹೈದರ್ ಅಲಿ ಹೊಸಕೋಟೆಯನ್ನು ಮೈಸೂರಿಗೆ ಸೇರಿಸಿದ. ಪಟ್ಟಣದಲ್ಲಿ ಅವಿಮುಕ್ತೇಶ್ವರ, ವಿಠಲೇಶ್ವರ ದೇವಾಲಯಗಳೂ ಎರಡು ಆಂಜನೇಯ ಗುಡಿಗಳೂ ಇವೆ. ಅವಿಮುಕ್ತೇಶ್ವರ ದೇವಾಲಯದ ಬಳಿ ಆಕರ್ಷಕ ಶಿಲ್ಪವುಳ್ಳ ದೊಡ್ಡ ದೀಪಸ್ತಂಭವಿದೆ. ಈ ಪಟ್ಟಣದಲ್ಲಿ ಪ್ರತಿವರ್ಷ ಜರುಗುವ ಅಮೃತೇಶ್ವರ ರಥೋತ್ಸವ ಮತ್ತು ಧರ್ಮರಾಯನ ಕರಗ ಬಹು ಪ್ರಸಿದ್ಧವಾದವು.										
		(ಎ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ